ಇಕ್ಷ್ವಾಕು ರಾಜರು
	ಉತ್ತರಭಾರತದಿಂದ ದಕ್ಷಿಣದೇಶಕ್ಕೆ ವಲಸೆ ಬಂದು ಇಲ್ಲಿ ರಾಜ್ಯಗಳನ್ನು ಕಟ್ಟಿದ ಮತ್ಸ್ಯ, ಕೇಕಯ ಮುಂತಾದ ಅರಸುಮನೆತನಗಳಲ್ಲಿ ಒಂದು. ಮನುವಿನ ಮಗ ಇಕ್ಷ್ವಾಕು ಅಯೋಧ್ಯೆಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ರಾಜ್ಯ ಕಟ್ಟಿದ. ಪುರಾಣಗಳಲ್ಲಿ ಮಾತ್ರವಲ್ಲದೆ ಪಾಳಿವಾಙ್ಮಯದಲ್ಲಿ ಮತ್ತು ಜಾತಕ ಕಥೆಗಳಲ್ಲಿ, ಇಕ್ಷ್ವಾಕುವಿನ (ಒಕ್ಕಾಕ) ಉಲ್ಲೇಖ ಬರುತ್ತದೆ. ಈತ ಐತಿಹಾಸಿಕ ವ್ಯಕ್ತಿಯೆಂಬುದು ನಿಜ. ಆದರೆ ಇವನಿಗೆ ನೂರು ಮಕ್ಕಳಿದ್ದರೆಂದೂ ವಿಕುಕ್ಷಿಯೆಂಬ ಔರಸಪುತ್ರ ತಂದೆಯ ಅನಂತರ ಅಯೋಧ್ಯಾಪತಿಯಾದನೆಂದೂ ಉಳಿದವರು ನೆರೆಪ್ರಾಂತ್ಯಗಳಿಗೆ ತೆರಳಿ ಅಲ್ಲಲ್ಲಿ ಸಣ್ಣ ರಾಜ್ಯಗಳನ್ನು ಸ್ಥಾಪಿಸಿದರೆಂದೂ ಉಲ್ಲೇಖವಿದೆ. ಅದರಲ್ಲಿ ಹಲವರು ದಕ್ಷಿಣಾಪಥಕ್ಕೂ ಬಂದರಂತೆ. ಕುಶನೆಂಬ ಇಕ್ಷ್ವಾಕುಪುತ್ರ ದಕ್ಷಿಣ ಕೋಸಲವೆಂಬ ಹೆಸರಿನ ರಾಜ್ಯವೊಂದನ್ನು ಕಟ್ಟಿದನೆಂದೂ ಅದಕ್ಕೆ ಕುಶಸ್ಥಲಿಯೆಂಬ ಹೆಸರು ಬಂತೆಂದೂ ವಿಷ್ಣುಪುರಾಣ ಹೇಳುತ್ತದೆ. ಇವರಲ್ಲಿ ಹಲವಾರು ಮಂದಿ ದಕ್ಷಿಣಪ್ರಾಂತ್ಯಗಳಲ್ಲಿ ನೆಲೆಯೂರಿ ಪ್ರಸಿದ್ಧರಾಗಿದ್ದಾರೆ. ಗೋದಾವರೀ ತೀರದಲ್ಲಿ ರಾಜ್ಯಗಳನ್ನು ಕಟ್ಟಿದ ಅಶ್ಮಕ, ಮುಲಕ ಮುಂತಾದವರೆಲ್ಲ ಈ ವಂಶದವರು. ಅಂಗದೇಶದ ಕಡೆಯಿಂದ ವೆಂಗಿನಾಡಿಗೆ ಬಂದು ನೆಲೆಸಿದ ಯಶೋಧರನೂ ಈ ವಂಶದವ. ಈತ ಜೈನತೀರ್ಥಂಕರ ವಾಸುಪೂಜ್ಯನ ಕಾಲದಲ್ಲಿದ್ದವನೆಂದು ಪ್ರತೀತಿ. ಈತ ಅಲ್ಲಿ ಕಟ್ಟಿದ ಪ್ರತಿಪಾಲಪುರವೆಂಬುದು ಈಗ ಭಟ್ಟಿಪ್ರೋಲು ಎಂಬ ಆಂಧ್ರನಗರಿಯಾಗಿದೆ. ಇವನ ವಿಚಾರ ನಯಸೇನನ ಧರ್ಮಾಮೃತದಲ್ಲಿ ಬರುತ್ತದೆ. ಅಂತೂ ಇಕ್ಷ್ವಾಕುಗಳಿಗೂ ದಕ್ಷಿಣ ದೇಶಕ್ಕೂ ತುಂಬ ಪ್ರಾಚೀನ ಸಂಬಂಧವಿರುವುದು ವ್ಯಕ್ತವಾಗುತ್ತದೆ. 

ಈಗಿನ ನಾಗಾರ್ಜುನಕೊಂಡವನ್ನೊಳಗೊಂಡು ಕೃಷ್ಣಾನದೀತೀರದಲ್ಲಿ ಕರ್ನೂಲು ಜಿಲ್ಲೆಯವರೆಗೆ ವ್ಯಾಪಿಸಿರುವ ಶ್ರೀಪರ್ವತ ಇವರ ಕೇಂದ್ರ ಸ್ಥಳ. ಇದರಿಂದಾಗಿ ಈ ರಾಜರಿಗೆ ಶ್ರೀಪರ್ವತೀಯಾಂಧ್ರರೆಂಬ ಹೆಸರೂ ಇತ್ತು. ಚಾರಿತ್ರಿಕವಾಗಿ ಇವರು ಪ್ರಬಲರಾಗುವ ಮುಂಚೆ ಸಾತವಾಹನರು ಈ ಪ್ರದೇಶದ ಅಧಿಪತಿಗಳಾಗಿದ್ದರು. ರಾಯಸೀಮುಕ (ಸಿಂಧುಕ) ಸಾತವಾಹನನ ಕಾಲದಿಂದ ನಾಲ್ಕನೆಯ ಪುಲೋಮಾವಿಯವರೆಗೆ ಈ ವಂಶದಲ್ಲಿ ಬಂದ ಅರಸರ ಉಲ್ಲೇಖ ವಾಯುಪುರಾಣ, ಮತ್ಸ್ಯಪುರಾಣಗಳಲ್ಲಿ ಬರುತ್ತದೆ. ಕ್ರಿ.ಶ. 128ರ ಸುಮಾರಿಗೆ ಪ್ರಸಿದ್ಧನಾಗಿದ್ದ ಗೌತಮೀಪುತ್ರ-ಯಜ್ಞಶ್ರೀ-ಶಾತಕರ್ಣಿಯ ಅನಂತರ ಸಾತವಾಹನರ ಬಲ ಕುಗ್ಗಿತು. ಅವರ ಸಾಮಂತರಾಗಿದ್ದ ಅಭೀರರೂ ಇಕ್ಷ್ವಾಕುಗಳೂ ಪ್ರಬಲರಾದರು. ಸಾತವಾಹನ ಸಾಮ್ರಾಜ್ಯ ಶಿಥಿಲವಾಯಿತು. ಇಕ್ಷ್ವಾಕುಗಳು ಅವರ ಸಾಮಂತರಾಗಿದ್ದರೆಂದೂ ದಂಡನಾಯಕರಾಗಿದ್ದರೆಂದೂ ಮತಭೇದವಿದೆ. ಸಾತವಾಹನರಾಜರು ದುರ್ಬಲರೆಂದು ತೋರಿದೊಡನೆ ಇವರು ಧಾನ್ಯಕಟಕವೆಂಬ ಪ್ರದೇಶವನ್ನು ಆಕ್ರಮಿಸಿಕೊಂಡು ತಮ್ಮದೇ ರಾಜ್ಯವನ್ನು ಕಟ್ಟಿದರು. ಇದು ಕ್ರಿ.ಶ. ಎರಡನೆಯ ಶತಮಾನದ ಪರಾರ್ಧದ ಮಾತು. 

ಇವರ ವಿಚಾರ ಜಗ್ಗಯ್ಯಪೇಟೆಯಲ್ಲಿ ದೊರೆತಿರುವ ಶಾಸನವೊಂದರಿಂದ ತಿಳಿಯುತ್ತದೆ. ಇದರ ಭಾಷೆ ಪ್ರಾಕೃತ, ಲಿಪಿ ಬ್ರಾಹ್ಮೀ. ಈ ಶಾಸನದಲ್ಲಿ ಮೂವರು ರಾಜರ ಉಲ್ಲೇಖವಿದೆ; ಕ್ಷಾಂತಮೂಲ (ಚಾಂತಮೂಲ), ವೀರಪುರುಷದತ್ತ (ವೀರಪುರಿಸದತ) ಮತ್ತು ಎಹುವಲ ಕ್ಷಾಂತಮೂಲ. ಕ್ಷಾಂತಮೂಲ ಎನ್ನುವುದು ಪ್ರಾಕೃತದಲ್ಲಿ ಜಾಂತಮೂಲವಾಗುತ್ತದೆ. ಇವರ ರಾಜಧಾನಿಯಾಗಿದ್ದ ವಿಜಯಪುರಿ ಶ್ರೀಪರ್ವತಪ್ರದೇಶದಲ್ಲೇ ಇತ್ತು. ಸಾತವಾಹನರಂತೆ ಇವರೂ ಅಶ್ವಮೇಧಯಾಗ ಮಾಡಿ ವಿಖ್ಯಾತರಾದರು. ಕ್ಷಾಂತಮೂಲನೇ ಶ್ರೀಪರ್ವತದಲ್ಲಿ ಇಕ್ಷ್ವಾಕುವಂಶದ ರಾಜ್ಯ ಕಟ್ಟಿದವ. ಈತ ಮೊದಲಿಗೆ ಆಂಧ್ರ ಸಾತವಾಹನರ ಬಳಿ ಊಳಿಗದಲ್ಲಿದ್ದುದರಿಂದ ಈ ಮನೆತನದವರಿಗೆ ಆಂಧ್ರಭೃತ್ಯರೆಂಬ (ಆಂಧ್ರಸಾತವಾಹನಭೃತ್ಯ) ಹೆಸರೂ ಕೂಡ ಬಳಕೆಯಲ್ಲಿತ್ತು. ಕ್ಷಾಂತಮೂಲ ಸ್ವತಂತ್ರನಾಗಿ ರಾಜ್ಯವಾಳಲು ಮೊದಲಿಟ್ಟ ಅನಂತರ ವಾಸಿಷ್ಠೀಪುತ್ತ ಶ್ರೀಕ್ಷಾಂತಮೂಲನೆಂದು ತನ್ನನ್ನು ಕರೆದುಕೊಂಡ. ಮೇಲಿನ ಶಾಸನದಲ್ಲಿ ವಾಸಿಷ್ಠೀಸುತ ಸಿರಿ ಚಾಂತಮೂಲನೆಂದು ಪ್ರಸ್ತಾಪವಿದೆ. ಆತನ ತಾಯಿ ವಾಸಿಷ್ಠಿ. ತಾಯಿಯ ಮಗನೆಂದು ವ್ಯವಹರಿಸಿಕೊಳ್ಳುವ ಪದ್ಧತಿ ಆ ಕಾಲಕ್ಕೆ ಪ್ರಚುರವಾಗಿತ್ತು. ತಂದೆಯ ಹೆಸರು ಉಪಲಬ್ಧವಿಲ್ಲ. 

ಇವನ ಮನೆದೇವರು ಸ್ಕಂದ (ಮಹಾಸೇನ). ಈತ ವೈದಿಕ ಸಂಪ್ರದಾಯದಲ್ಲಿ ಶ್ರದ್ಧೆಯಿದ್ದವ. ಆದ್ದರಿಂದಲೇ ಅಶ್ವಮೇಧ, ವಾಜಪೇಯ, ಅಗ್ನಿಷ್ಟೋಮ ಯಾಗಗಳನ್ನು ಮಾಡಿದ. ಈ ಯಾಗಗಳನ್ನು ಮಾಡಿದುದು ಈತ ಮಹಾಬಲಿಷ್ಠನಾಗಿದ್ದನೆಂದೂ ರಾಜ್ಯ ವೈಭವಸಂಪನ್ನವಾಗಿದ್ದಿತೆಂದೂ ಸೂಚಿಸುತ್ತದೆ. ಅಧಿಕವಾದ ಸಂಪತ್ತನ್ನು ಮುಕ್ತಹಸ್ತದಿಂದ ದಾನ ಮಾಡಿದನೆಂದು ಪ್ರತೀತಿ. 
ಇವನಿಗೆ ಮಾಢರಿಯೆಂಬ ಹೆಂಡತಿ ಇದ್ದಳು. ಮಗ ವೀರಪುರುಷದತ್ತ (ವೀರಪುಸದತ-ಮಾಡರೀಪುತ್ರ) ಮುಂದೆ ಉತ್ತರಾಧಿಕಾರಿಯಾದ. ಮಗಳು ಅಟವಿ ಶಾಂತಿಶ್ರೀ; ಆಕೆಯ ಗಂಡ ಸ್ಕಂದವಿಶಾಖ (ಖಂಡವಿಸಾಖಂಣಕ) ಕ್ಷಾಂತಮೂಲನ ದಂಡನಾಯಕನಾಗಿದ್ದ. ಕ್ಷಾಂತಮೂಲನ ತಂಗಿ ಹಮ್ರ್ಯಶ್ರೀಯ (ಹಮ್ಮಸಿರಿ) ಇಬ್ಬರು ಮಕ್ಕಳನ್ನೂ (ವಾಪಿಶ್ರೀ-ಬಾವಿಸಿರಿ, ಷಷ್ಠಿಶ್ರೀ-ಚಡಿಸಿರಿ) ಮಗ ವೀರ ಪುರುಷನಿಗೇ ತಂದುಕೊಂಡು ವಿವಾಹಮಾಡಿದ. ಸೋದರಿಕೆಯಲ್ಲಿ ವಿವಾಹ ಮಾಡಿಕೊಳ್ಳುವ ಸಂಪ್ರದಾಯ ಆಗಲೇ ಪ್ರಚಲಿತವಾಗಿದ್ದಂತೆ ತೋರುತ್ತದೆ. ಸೋದರಮಾವನ ಮಗಳನ್ನು ಮದುವೆಯಾಗುವುದು ಕನ್ನಡನಾಡಿನಲ್ಲೂ ತೆಲಗು ದೇಶದಲ್ಲೂ ಪ್ರಚಲಿತವಾಗಿದೆ. ಇವನ ಇನ್ನೊಬ್ಬ ತಂಗಿ ಶಾಂತಿಶ್ರೀಯ (ಚಾಂತಿಸಿರಿ) ಗಂಡ ವಾಸಿಷ್ಠೀಪುತ್ರಸ್ಕಂದಶ್ರೀ ಈವಾಸಿಠೀಪುತಖಂದಸಿರಿ) ಅದೇ ರಾಜ್ಯದ ಮಹಾ ಸಾಮಂತನಾಗಿದ್ದ. 

ಎರಡನೆಯ ಇಕ್ಷ್ವಾಕುರಾಜನಾದ ವೀರಪುರುಷದತ್ತ ಏನಿಲ್ಲವೆಂದರೂ ಇಪ್ಪತ್ತು ವರ್ಷಗಳ ಕಾಲ ರಾಜ್ಯವಾಳಿದ. ಈ ಅವಧಿಯಲ್ಲಿ ಸಿದ್ಧವಾದ ಪ್ರಾಕೃತ ಶಾಸನಗಳು ದೊರೆತಿವೆ. ವೀರಪುರುಷದತ್ತ ನೆರೆರಾಜ್ಯಗಳ ಸ್ನೇಹಗಳಿಸಿ ಉಳಿಸಿಕೊಳ್ಳಲು ಆ ರಾಜ್ಯಗಳ ರಾಜಪುತ್ರಿಯರನ್ನು ಮದುವೆಯಾದ. ಅವನ ರಾಣಿಯರಲ್ಲಿ ಒಬ್ಬಳಾದ ರುದ್ರಧರ ಭಟ್ಟಾರಿಕೆ ಉಜ್ಜಯಿನಿಯ ಅರಸುಕುವರಿ, ಚಷ್ಟನನೆಂಬ ಶಕರಾಜನ ಮಗಳು. ಈ ಚಷ್ಟನವಂಶದವರೇ ಆದ ಶಕಕ್ಷತ್ರಪರು ಪಶ್ಚಿಮ ಭಾರತದ ಅರಸರಾಗಿದ್ದರು. ಇವರೂ ಮೊದಲು ಸಾತವಾಹನರಾಜರ ಸಾಮಂತರಾಗಿದ್ದರು. ಅವರ ಅನಂತರ ಸ್ವತಂತ್ರರಾದರು. 

ವೀರಪುರುಷದತ್ತನ ಮಗ ಎಹುವುಲ ಕ್ಷಾಂತಮೂಲ, ಮಗಳು ಕೊಡಬಲಿಸಿರಿ. ಎಹುವುಲ ಸುಮಾರು ಹನ್ನೊಂದು ವರ್ಷಗಳ ಕಾಲ ರಾಜ್ಯವಾಳಿದಂತೆ ತೋರುತ್ತದೆ. ಅವನ ತಂಗಿ ಕೊಡಬಲಿಸಿರಿಯನ್ನು ಕನ್ನಡದ ಬನವಾಸಿಯ (ವೈಜಯಂತಿ) ರಾಜ ಕೈಹಿಡಿದ. ಬನವಾಸಿಯ ರಾಜರೂ ಚಷ್ಟನರಂತೆ ಇಕ್ಷ್ವಾಕುಗಳಂತೆ ಸಾತವಾಹನರಾಜರ ಸಾಮಂತರಾಗಿದ್ದು ಸಾತವಾಹನರ ಸಾಮ್ರಾಜ್ಯ ಶಿಥಿಲವಾದ ಅನಂತರ ಸ್ವತಂತ್ರರಾಜ್ಯ ಕಟ್ಟಿದರು. ಆಂಧ್ರದ ಇಕ್ಷ್ವಾಕುರಾಜರಿಗೂ ಕನ್ನಡನಾಡಿನ ಬನವಾಸಿರಾಜರಿಗೂ ಬಾಂಧವ್ಯವಿತ್ತು.

ಎಹುವುಲ ಕ್ಷಾಂತಮೂಲನ ಮಗ ಪುರುಷದತ್ತ. ಇವನ ಕಾಲದ ಶಾಸನ ಗುಂಟೂರು ಜಿಲ್ಲೆಯ ಗುರುಜಾಲದಲ್ಲಿ ದೊರಕಿದೆ. ಇದರಲ್ಲಿ ರಾಜನನ್ನು ಪ್ರಾಕೃತದ ರು¾ುಪುರಿಸದ-ಎಂಬ ಹೆಸರಿನಿಂದ ಸಂಬೋಧಿಸಿದ್ದಾರೆ. ಇವನಿಗೆ ರುದ್ರಪುರುಷದತ್ತನೆಂಬ ಹೆಸರು ಇದ್ದಿತೆಂದು ತಿಳಿದುಬರುತ್ತದೆ. ಬಹುಶಃ ಉಜ್ಜಯಿನಿಯ ರುದ್ರಧರಭಟ್ಟಾರಿಕೆಯ ಮಗನಿದ್ದಿರಬಹುದು. ಇವನಿಗೆ ಬೌದ್ಧಧರ್ಮದಲ್ಲಿ ಅನುರಕ್ತಿಯಿದ್ದಿತೆಂದು ತಿಳಿದುಬರುತ್ತದೆ. ಹಲಂಪುರದ ನೊದುಕಸಿರಿಯೆಂಬ ದೇವರಿಗೆ ಭೂಮಿಯನ್ನು ಉಂಬಳಿಯಾಗಿ ಕೊಟ್ಟಿದ್ದ. ಹಲಂಪುರವೆಂಬುದು ಈಗ ರಾಯಚೊರು ಜಿಲ್ಲೆಯಲ್ಲಿರುವ ಅಲಂಪೂರವೆಂಬ ಊರೆಂದೂ ನಾಗಾರ್ಜುನಕೊಂಡದ ಬಳಿಯಿರುವ ನಾಗುಲವರವೇ ಇದೆಂದೂ ಎರಡು ಮತಗಳಿವೆ. (ಹಲ ಎಂದರೆ ನೇಗಿಲು, ತೆಲುಗಿನಲ್ಲಿ ನಾಗುಲ). ಇವನ ಆಸಕ್ತಿಯಿಂದಲೇ ನಾಗಾರ್ಜುನಕೊಂಡದ ಸ್ತೂಪ ವಿಸ್ತರಿಸಿ ಇಡೀ ದೇಶದಲ್ಲಿ ಪ್ರಸಿದ್ಧವಾಯಿತು. ಈ ವಂಶದ ರಾಜರು ವೈದಿಕ ಸಂಪ್ರದಾಯದವರಾದರೂ ಬೌದ್ಧಧರ್ಮವನ್ನು ಪುರಸ್ಕರಿಸಿದ್ದರು. ಇವರ ಆಡಳಿತದ ಅವಧಿಯಲ್ಲೇ ಧಾನ್ಯಕಟಕ ಮತ್ತು ನಾಗಾರ್ಜುನಕೊಂಡ ವಿದ್ಯಾಪೀಠಗಳು ಪ್ರಸಿದ್ಧ ಬೌದ್ಧಕ್ಷೇತ್ರಗಳಾದುವು. ಇಲ್ಲಿಂದ ವಿದ್ಯಾರ್ಥಿಗಳು ನಾಡಿನಾದ್ಯಂತ ಹರಡಿದರು. ಇಲ್ಲಿಂದಲೇ ಬೌದ್ಧಧರ್ಮ ಬನವಾಸಿಗೆ ಹರಡಿತು; ಕನ್ನಡನಾಡಿನಲ್ಲಿ ಬೌದ್ಧಮತದ ಏಳಿಗೆಗೆ ಈ ಮನೆತನದ ಅರಸರ, ಅದೂ ಪುರುಷದತ್ತನ ಬೆಂಬಲವೇ ಕಾರಣ. ನಾಗಾರ್ಜುನಕೊಂಡದ ಸ್ತೂಪ-ವಿಹಾರಗಳನ್ನು ಬಿಟ್ಟು ಈ ಪ್ರದೇಶದಲ್ಲಿರುವ ಉಳಿದ ಹಲವಾರು ಬೌದ್ಧವಾಸ್ತುಶಿಲ್ಪಗಳೂ ಇವರ ಕಾಲದ್ದೇ. ಈ ಕಾಲದ ಶಾಸನವೆಲ್ಲ ಬೌದ್ಧವಿಹಾರಸ್ತೂಪಗಳ ನಿರ್ಮಾಣ, ದಾನಗಳಿಗೇ ಸಂಬಂಧಿಸಿದ್ದು. 

ಪುರುಷದತ್ತನ ಅನಂತರ ಬಂದ ರಾಜರು ಯಾರೋ ತಿಳಿಯದು. ಪ್ರಾಯಶಃ ಇವನೇ ಕಡೆಯವನಿರಬಹುದು. ಕ್ರಿ.ಶ. ಮೂರು-ನಾಲ್ಕನೆಯ ಶತಮಾನದ ಸುಮಾರಿಗೆ ಇವರ ವಂಶ ಕೊನೆಗೊಂಡಂತೆ ತೋರುತ್ತದೆ. ಆಗಲೇ ಪಲ್ಲವರು ಬಲವಾಗುತ್ತಿದ್ದರು. ಅವರ ಪ್ರಾಬಲ್ಯವೂ ಇಕ್ಷ್ವಾಕುಗಳ ಅವನತಿಗೆ ಕಾರಣವಿದ್ದಿರಬಹುದು. ಪಲ್ಲವಸಿಂಹವರ್ಮನ ಅನಂತರ ಆಳಿದ ಯುವಮಹಾರಾಜ ಸ್ಕಂದವರ್ಮನ ಕಾಲಕ್ಕೆ ಇಕ್ಷ್ವಾಕು ಅರಸರ ಕೇಂದ್ರವಾಗಿದ್ದ ಗುಂಟೂರು ಜಿಲ್ಲೆ ಪಲ್ಲವರ ಅಧೀನದಲ್ಲಿತ್ತೆಂದು ಮೈದವೋಲುಶಾಸನ ತಿಳಿಸುತ್ತದೆ. ಕೃಷ್ಣಾನದಿಯ ಉತ್ತರದಲ್ಲಿ ಇಕ್ಷ್ವಾಕುಗಳ ಅನಂತರ ಬೃಹತ್ವಲಾಯನಸ ಗೋತ್ರದ ಅರಸರು ತಲೆಯೆತ್ತಿ ನಿಂತರು. ಇಕ್ಷ್ವಾಕುಗಳ ಸಾಮಂತರಾಗಿದ್ದ ಪೂಗಿಯರು, ಧನಕರು, ಕುಲಹಕರು ಹಿರಣ್ಯಕರು ಎಲ್ಲರೂ ತಮ್ಮ ತಮ್ಮ ಪ್ರದೇಶಗಳಲ್ಲಿ ಸ್ವತಂತ್ರ ರಾಜ್ಯಗಳನ್ನು ಕಟ್ಟಿದರು.									
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ